ಮೂಲಪಾಪ -
ಮಾನವ ತನ್ನ ಅರಿವಿಲ್ಲದೆ ದೇವರ ನಿಯತಿ ಮೀರುವುದರ ಮೂಲಕ ಗೈಯುವ ಪಾಪ (ಒರಿಜಿನಲ್ ಸಿನ್). ಹುಟ್ಟಿನಿಂದಲೇ ಪಾಪಿಯಾದ ಮಾನವ ವಿಮೋಚನೆ ಹೊಂದುವುದು. ಸ್ವಶಕ್ತಿಯಿಂದ ಸಾಧ್ಯವಿಲ್ಲ : ಅದು ಕೇವಲ ಜ್ಞಾನಸ್ನಾನದಿಂದ (ಬ್ಯಾಪ್ಟಿಸಮ್) ಮಾತ್ರವೇ ಎಂಬ ನಂಬಿಕೆ ಕ್ರೈಸ್ತರಲ್ಲಿದೆ. ಮಾನವನು ದೇವರ ಸೃಷ್ಟಿ ಎಂಬ ಸತ್ಯಾಂಶಕ್ಕೆ ಬೈಬಲ್ ಸಾಕ್ಷಿಕೊಡುವುದು ಮಾತ್ರವಲ್ಲದೆ ಮಾನವ ದೇವರಿಂದ ಹೇಗೆ ದೂರವಾಗಿ ಹೋದ ಎಂಬುದಕ್ಕೂ ಸಾಕ್ಷಿ ಕೊಡುತ್ತದೆ. ಆದಿಕಾಂಡವ 2, 3ನೆಯ ಸಂಧಿಗಳಲ್ಲಿ ಪಾಪೋತ್ಪತ್ತಿಯನ್ನು ಕುರಿತು ಹೇಳಲಾಗಿದೆ. ಈ ಭಾಗದ ಸಾರಾಂಶ ಹೀಗಿದೆ : ದೇವರ ನಿಯಮಕ್ಕೆ ವಿರೋಧವಾಗಿ ಹೋಗುವುದೇ ಪಾಪ. ದೇವರು ಮಾನವನನ್ನು ಸೇಷ್ಟಿಸಿದಾಗಲೇ ಸೃಷ್ಟಿಯ ಮೇಲಿನ ಎಲ್ಲದರ ಮೇಲೂ ಸರ್ವಾಧಿಕಾರ ಕೊಟ್ಟ. ಅಲ್ಲದೆ ಅವನ ಪಕ್ಕೆಯಿಂದಲೇ ತೆಗೆದ ಅಂಶದಿಂದ ಸ್ತ್ರೀಯನ್ನು ಸೃಷ್ಟಿಸಿ ಅವನ ಸಹಚಾರಿಣಿಯಾಗಿ ಮಾಡಿದ. ಇಬ್ಬರೂ ಸ್ವತಂತ್ರರಾಗಿ ದೇವರ ಸೃಷ್ಟಿಯಲ್ಲಿ (ಈಡನ್ ತೋಟದಲ್ಲಿ) ಆನಂದದಿಂದ ಕಾಲ ಕಳೆಯುತ್ತಿದ್ದರು. ಆದರೆ ಅವರ ಸ್ವಾತಂತ್ರ್ಯಕ್ಕೆ ಮಿತಿ ಇತ್ತು. ಅಲ್ಲಿದ್ದ ಎಲ್ಲ ಮರಗಳ ಹಣ್ಣನ್ನು ತಿನ್ನಬಹುದೆಂಬ ಅಪ್ಪಣೆ ಅವರಿಗಿದ್ದರೂ ಅದರಲ್ಲಿ ಎರಡು ಮರಗಳ ಹಣ್ಣನ್ನು ತಿನ್ನಬಾರದೆಂಬ ಅಪ್ಪಣೆಯಾಗಿತ್ತು ಒಂದು ಒಳ್ಳೆಯದು ಕೆಟ್ಟದ್ದರ ತಿಳಿವನ್ನು ಉಂಟುಮಾಡುವ ಮರ. ಇನ್ನೊಂದು ಜೀವ ವೃಕ್ಷದ ಮರ. ಇಲ್ಲಿ ಮಾನವಸ್ವಾತಂತ್ರ್ಯದ ಪರೀಕ್ಷೆಯಾಗುತ್ತದೆ. ದುರಾಲೋಚನೆ ಸರ್ಪದ ರೂಪದಲ್ಲಿ ಬಂದು ಹೆಂಗಸಿನ ಮನಸ್ಸನ್ನು ಕೆಡಿಸುತ್ತದೆ. ಈ ಆಲೋಚನೆ ಹೇಗೆ ಬಂತೆಂದು ವಿವರಿಸಲು ಆಗದೆ ಸರ್ಪದ ರೂಪದಲ್ಲಿ ಬಂದು ಹೆಂಗಸನ್ನು ವಂಚಿಸಿ ದೇವರ ಅಪ್ಪಣೆಗೆ ವಿರೋಧವಾಗಿ ವರ್ತಿಸಬೇಕೆಂದು ಅವಳನ್ನು ಪ್ರೇರೇಪಿಸಿತು ಎನ್ನಲಾಗಿದೆ. ಈ ಆಲೋಚನೆಯಲ್ಲಿ ಕಂಡುಬರುವುದೇನೆಂದರೆ ಮಾನವ ಯಾವಾಗಲೂ ಯಾರ ಅಧೀನವೂ ಇರದೆ ಸ್ವತಂತ್ರನಾಗಿರಬೇಕೆಂದು ಅಪೇಕ್ಷಿಸುವುದು. ಮಾನವ ಸ್ವತಂತ್ರ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ತನ್ನನ್ನು ಯಾರೂ ಕೇಳುವವರಿಲ್ಲವೆಂಬ ಭಾವನೆಯಿಂದ ಮುಂದೆ ಹೋಗಿ ಎಡವಿ ಬೀಳುತ್ತಾನೆ. ಇನ್ನೊಬ್ಬರಿಗೆ ನೋವು ಕೊಡುತ್ತಾನೆ. ಕೆಲವು ಸಾರಿ ತನಗೆ ತಾನೇ ಗಂಡಾಂತರವನ್ನು ತಂದುಕೊಳ್ಳುತ್ತಾನೆ. ಇದು ಆದದ್ದು ಹೇಗೆ ಎಂದು ಅವನಿಗೂ ತಿಳಿಯದು. ಇದೇ ಮೂಲಪಾಪ. ಪೌಲ ರೋಮಾಪುರದವರಿಗೆ ಬರೆದ ಪತ್ರಿಕೆಯ 7ನೆಯ ಸಂಧಿಯಲ್ಲಿ ಇದನ್ನು ಉತ್ತಮವಾಗಿ ಬಣ್ಣಿಸಲಾಗಿದೆ. 					  						      
(ಡಿ.ಪಿ.ಎಸ್.; ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ